Friday, September 30, 2016

ಮುಖ್ಯಶಿಕ್ಷಕನ ಕ್ರೂರಶಿಕ್ಷೆ


ಮಂಗಳೂರು,(kannadaevision.in) ಸೆ.೩೦- ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ನಿಟ್ಟಡೆಯಲ್ಲಿರುವ ಕುಂಭಶ್ರೀ ಆಂಗ್ಲಮಾಧ್ಯಮ ವಸತಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ಪ್ರೌಢಶಾಲಾ ವಿದ್ಯಾರ್ಥಿನಿಯ ಮೇಲೆ ಮೃಗೀಯ ರೀತಿಯಲ್ಲಿ ಹಲ್ಲೆ ನಡೆಸಿದ್ದ ಪ್ರಕರಣ ನಡೆದು ವಾರ ಕಳೆಯುತ್ತಿದ್ದರೂ ಪೊಲೀಸರು ಆರೋಪಿ ಶಿಕ್ಷಕನ ಮೇಲೆ ಕಾನೂನು ಕ್ರಮ ಜರುಗಿಸಿಲ್ಲ. ತಲೆ ಹಾಗೂ ಕೈಗೆ ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಿದ್ದು, ಪೊಲೀಸರು ಯಾರದ್ದೋ ಒತ್ತಡಕ್ಕೆ ಮಣಿದು ಶಿಕ್ಷಕನನ್ನು ಬಂಧಿಸಲು ಹಿಂದೇಟು ಹಾಕುತ್ತಿರುವ ಬಗ್ಗೆ ನಾಗರಿಕರು ಆಕ್ರೋಶಗೊಂಡಿದ್ದಾರೆ.
ಘಟನೆಯ ವಿವರ:
ಕುಂಭಶ್ರೀ ಆಂಗ್ಲಮಾಧ್ಯಮ ವಸತಿ ಶಾಲೆಯಲ್ಲಿ ಒಂಬತ್ತನೇ ತರಗತಿ ಕಲಿಯುತ್ತಿರುವ ಕೇರಳ ಮೂಲದ ಕ್ರೈಸ್ತ ವಿದ್ಯಾರ್ಥಿನಿ ಮುಖ್ಯ ಶಿಕ್ಷಕರ ರೌದ್ರಾವತಾರಕ್ಕೆ ಸಿಕ್ಕಿ ನಲುಗಿದವಳು. ಕಳೆದ ಸೆ.೨೩ರಂದು ಘಟನೆ ನಡೆದಿದ್ದು ಬೆಳಗ್ಗಿನ ಜಾವ ಸಂತಸ್ತ ವಿದ್ಯಾರ್ಥಿನಿ ಮತ್ತು ಇನ್ನೋರ್ವಳನ್ನು ಸ್ಟಾಫ್ ರೂಂಗೆ ಕರೆದಿದ್ದ ಶಿಕ್ಷಕ ವೇಣೂರು ನಿವಾಸಿ ಗಿರೀಶ್(೩೬) ಎಂಬಾತ ಬಾಲಕಿಯ ಮೇಲೆ ಹಲ್ಲೆ ಮಾಡಿದ್ದ. ಕ್ಷುಲ್ಲಕ ಕಾರಣಕ್ಕೆ ಬಾಲಕಿಯ ತಲೆ ಮತ್ತು ಕೈಗೆ ಹಲ್ಲೆ ಮಾಡಿದ್ದರಿಂದ ಬಾಲಕಿಯ ತಲೆಗೆ ಗಂಭೀರ ಗಾಯಗಳಾಗಿತ್ತು. ಕೈಯಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಈ ಬಗ್ಗೆ ಬಾಲಕಿ ಕೇರಳದಲ್ಲಿರುವ ತನ್ನ ಹೆತ್ತವರಿಗೆ ವಿಷಯ ತಿಳಿಸಿದ್ದಳು.
ಬಾಲಕಿಯ ಹೆತ್ತವರು ಮರುದಿನ ಶಾಲೆಗೆ ಆಗಮಿಸಿ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ತಲೆಗೆ ಐದು ಸ್ಟಿಚ್ ಹಾಕಲಾಗಿತ್ತು. ಈ ಬಗ್ಗೆ ಚೈಲ್ಡ್‌ಲೈನ್ ಅಧಿಕಾರಿಗಳಿಗೆ ದೂರನ್ನು ಸಲ್ಲಿಸಲಾಗಿತ್ತು. ಅದರಂತೆ ಆಸ್ಪತ್ರೆಗೆ ಧಾವಿಸಿದ ಚೈಲ್ಡ್‌ಲೈನ್ ನಿರ್ದೇಶಕ ರೆನ್ನಿ ಡಿಸೋಜ ಅವರು ಬಾಲಕಿಯ ಬಳಿ ಘಟನೆಯ ಸಂಪೂರ್ಣ ವಿವರ ಪಡೆದು ವೇಣೂರು ಠಾಣೆಗೆ ದೂರನ್ನು ಸಲ್ಲಿಸಲಾಗಿತ್ತು. ವೇಣೂರು ಠಾಣೆಯಲ್ಲಿ ಆರೋಪಿ ಮುಖ್ಯಶಿಕ್ಷಕ ಗಿರೀಶ್ ವಿರುದ್ಧ ಪ್ರಕರಣ ದಾಖಲಾಗಿ ಐದು ದಿನಗಳು ಕಳೆದಿದ್ದು ಡಿಸಿಪಿ ಅವರಿಗೂ ದೂರು ನೀಡಲಾಗಿದೆ. ಆದರೆ ಪೊಲೀಸ್ ಇಲಾಖೆ ಪ್ರಕರಣವನ್ನು ಇನ್ನೂ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಬಾಲಕಿಯನ್ನು ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
‘ದೂರನ್ನೇ ನೀಡಿಲ್ಲ’
ಪ್ರಕರಣದ ಬಗ್ಗೆ ‘ಸಂಜೆವಾಣಿ’ ಪತ್ರಿಕೆ ವೇಣೂರು ಪೊಲೀಸ್ ಠಾಣೆಯ ಅಧಿಕಾರಿ ಲೋಲಾಕ್ಷ ಅವರನ್ನು ಸಂಪರ್ಕಿಸಿ ಘಟನೆಯನ್ನು ವಿವರಿಸಿದಾಗ ‘ಅಂಥ ಪ್ರಕರಣ ನಡೆದ ಬಗ್ಗೆ ಇಲ್ಲಿ ಯಾವುದೇ ದೂರು ದಾಖಲಾಗಿಲ್ಲ. ನಮಗೆ ಅದರ ಬಗ್ಗೆ ಮಾಹಿತಿಯೇ ಇಲ್ಲ. ಅದು ಚೈಲ್ಡ್‌ಲೈನ್ ಅವರಲ್ಲಿ ದೂರು ದಾಖಲಾಗಿರಬೇಕು’ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಿವರಾಮ ಎಂಬವರು ದೂರು ಸ್ವೀಕರಿಸಲ್ಪಟ್ಟ ಎಫ್‌ಐಆರ್ ಪ್ರತಿ ಇದ್ದರೂ ಪೊಲೀಸರು ಪ್ರಕರಣದ ಬಗ್ಗೆ ತಿಳಿದೇ ಇಲ್ಲ ಎನ್ನುತ್ತಿರುವುದು ಅನೇಕ ಅನುಮಾನಕ್ಕೆಡೆ ಮಾಡಿಕೊಟ್ಟಿದೆ. ಶಾಲಾ ಬಾಲಕಿಗೆ ಮುಖ್ಯಶಿಕ್ಷಕರೊಬ್ಬರು ಅಮಾನವೀಯವಾಗಿ ಹಲ್ಲೆಗೈದಿರುವ ಪ್ರಕರಣದ ಗಂಭೀರತೆ ಅರಿತು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಲು ಮುತುವರ್ಜಿ ವಹಿಸಬೇಕಿದ್ದ ಪೊಲೀಸ್ ಅಧಿಕಾರಿಗಳು ಸುಮ್ಮನಿದ್ದು ಏನೂ ನಡೆದೇ ಇಲ್ಲ ಎನ್ನುತ್ತಿರುವ ಹಿಂದೆ ಕಾಣದ ಕೈಗಳು ಕಸರತ್ತು ನಡೆದಿರುವ ಬಗ್ಗೆಯೂ ನಾಗರಿಕರು ಸಂದೇಹ ವ್ಯಕ್ತಪಡಿಸುವಂತಾಗಿದೆ.
-ಲೋಲಾಕ್ಷ, ವೇಣೂರು ಎಸ್.ಐ.
‘ದೂರು ನೀಡಿದ್ದೇವೆ, ಕಠಿಣ ಕ್ರಮ ಜರುಗಿಸಬೇಕಿದೆ’
‘ವೇಣೂರಿನ ಕುಂಭಶ್ರೀ ಆಂಗ್ಲಮಾಧ್ಯಮ ವಸತಿ ಶಾಲೆಯಲ್ಲಿ ಮುಖ್ಯಶಿಕ್ಷಕ ಗಿರೀಶ್ ಎಂಬವರು ಬಾಲಕಿಯ ಮೇಲೆ ಅಮಾನುಷ ಹಲ್ಲೆ ಮಾಡಿರುವುದು ಶಿಕ್ಷಾರ್ಹ ಅಪರಾಧ. ಆತನ ವಿರುದ್ಧ ವೇಣೂರು ಠಾಣೆ ಮತ್ತು ಡಿಸಿಪಿ ಅವರಿಗೆ ದೂರು ನೀಡಲಾಗಿದೆ. ಬಾಲಕಿಯ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಶಿಕ್ಷಣ ಸಂಸ್ಥೆಯೇ ಭರಿಸಬೇಕಿದೆ ಮತ್ತು ಮುಂದೆ ಅದೇ ಶಿಕ್ಷಣ ಸಂಸ್ಥೆಯಲ್ಲಿ ಬಾಲಕಿ ಶಿಕ್ಷಣ ಮುಂದುವರಿಸುತ್ತಾಳೆಯೇ ಎಂಬ ಬಗ್ಗೆ ಕೌನ್ಸೆಲಿಂಗ್ ನಡೆಯಬೇಕು. ಆರೋಪಿಯನ್ನು ಪೊಲೀಸರು ಬಂಧಿಸಿ ಕಾನೂನು ರೀತಿಯಲ್ಲಿ ಶಿಕ್ಷಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಈ ಕುರಿತು ಇನ್ನಷ್ಟು ಕಠಿಣ ಕ್ರಮಗಳನ್ನು ಚೈಲ್ಡ್‌ಲೈನ್ ತೆಗೆದುಕೊಳ್ಳಲಿದೆ.’ ಎಂದು ಘಟನೆಯ ಕುರಿತು  ಪ್ರತಿಕ್ರಿಯಿಸಿದ್ದಾರೆ.
key word: venur-school-teacher-news

No comments:

Post a Comment