Thursday, September 29, 2016

2.86 ಕೋಟಿ ವೆಚ್ಚ ಇಂದಿನಿಂದ ಹೂಡಿ ರೈಲು ನಿಲ್ದಾಣ ಆರಂಭ


ಬೆಂಗಳೂರು: (kannadaevision..in)ಐಟಿ ಉದ್ಯೋಗಿಗಳು ಎರಡು ವರ್ಷಗಳಿಂದ ಕಾತರರಿಂದ ಕಾಯುತ್ತಿದ್ದ ಹೂಡಿ ಬಳಿಯ ನೂತನ ರೈಲು ನಿಲ್ದಾಣ ಗುರುವಾರದಿಂದ (ಸೆ.29) ಕಾರ್ಯಾರಂಭ ಮಾಡಲಿದೆ. ನೈಋತ್ಯ ರೈಲ್ವೆಯ ಕೃಷ್ಣರಾಜಪುರ ಮತ್ತು ವೈಟ್​ಫೀಲ್ಡ್  ರೈಲು ನಿಲ್ದಾಣಗಳ ನಡುವೆ, ಮಹದೇವಪುರ ಕ್ಷೇತ್ರದ ಹೂಡಿ ಗೇಟ್ ಬಳಿ ₹2.86 ಕೋಟಿ ವೆಚ್ಚದಲ್ಲಿ  ಈ ರೈಲು ನಿಲ್ದಾಣ ನಿರ್ಮಿಸಲಾಗಿದೆ. ಇದಕ್ಕಾಗಿ ಸಂಸದ ಪಿ.ಸಿ.ಮೋಹನ್‌ ಅವರು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ  ₹1.76 ಕೋಟಿ ಅನುದಾನನೀಡಿದ್ದಾರೆ. ಸಂಸದರ ಪ್ರದೇಶಾಭಿವೃದ್ಧಿ ನಿಧಿ ಅನುದಾನದಲ್ಲಿ ನಿರ್ಮಿಸಲಾದ, ದೇಶದ  ಪ್ರಥಮ ರೈಲು ನಿಲ್ದಾಣ ಇದಾಗಿದೆ.

‘ಈ ರೀತಿ ಎಲ್ಲಾ ಸಂಸದರು ರೈಲ್ವೆ ಅಭಿವೃದ್ಧಿಗೆ ತಮ್ಮ ನಿಧಿಯನ್ನು ವಿನಿಯೋಗಿಸಿದರೆ, ರೈಲ್ವೆ ಯೋಜನೆಗಳು ಯಶಸ್ವಿಯಾಗುತ್ತವೆ’ ಎಂದು  ರೈಲ್ವೆ ಸಚಿವ ಸುರೇಶ್‌ ಪ್ರಭು ರೈಲ್ವೆ ಬಜೆಟ್‌ ಮಂಡನೆಯ ಸಂದರ್ಭದಲ್ಲಿ ಅಭಿನಂದಿಸಿದ್ದರು.

ಟಿಕೆಟ್‌ ಬುಕ್ಕಿಂಗ್‌ ಕೇಂದ್ರ ನಿರ್ಮಾಣ ಕಾರ್ಯವೂ  ಪೂರ್ಣಗೊಂಡಿದೆ. ಎರಡು ಪ್ಲ್ಯಾಟ್‌ಫಾರಂಗಳಿಗೆ ಸಂಪರ್ಕ ಕಲ್ಪಿಸಲು ₹ 1.11 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸ್ಕೈವಾಕ್‌ ಕಾಮಗಾರಿ ಹೊರತುಪಡಿಸಿದರೆ, ರೈಲು ನಿಲ್ದಾಣ ಕಾರ್ಯಾರಂಭ ಮಾಡಲು ಎಲ್ಲ ರೀತಿಯಿಂದಲೂ ಸಜ್ಜಾಗಿದೆ.

‘ಹೂಡಿ ಪ್ರದೇಶದಲ್ಲಿ ಐ.ಟಿ ಕ್ಷೇತ್ರದ ಕಂಪೆನಿಗಳ ಸಂಖ್ಯೆ ಹೆಚ್ಚು ಇದೆ. ಇಲ್ಲಿ ಕೆಲಸಕ್ಕೆ ಬರುವ ಅನೇಕರು ಸ್ಯಾಟಲೈಟ್‌ ಗೂಡ್ಸ್‌ ಟರ್ಮಿನಲ್‌ನಲ್ಲಿ ರೈಲಿನಿಂದ ಇಳಿದು ಹಳಿಯ ಮೇಲೆ ನಡೆಯುತ್ತಿದ್ದರು. ಅಪಾಯವಿದ್ದರೂ ಜನರು ಇಲ್ಲಿ ಇಳಿದು ಹೋಗುತ್ತಾರೆ. ಅದನ್ನು ಅರಿತು ಇಲ್ಲೊಂದು ನಿಲ್ದಾಣ ಸ್ಥಾಪಿಸುವಂತೆ ಒತ್ತಾಯಿಸಿದ್ದೆವು’ ಎಂದು ಐ.ಟಿ ಉದ್ಯೋಗಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ರೈಲು ನಿಲ್ದಾಣದಿಂದ ವೈಟ್‌ಫೀಲ್ಡ್‌ ಮತ್ತು ಐಟಿಪಿಎಲ್‌ ಪ್ರದೇಶದಲ್ಲಿರುವ ಸಾವಿರಾರು ಸಾಫ್ಟ್‌ವೇರ್‌ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ. ‘ಈ ಮುಂಚೆ ಸ್ಯಾಟಲೈಟ್‌ ಗೂಡ್ಸ್‌ ಟರ್ಮಿನಲ್‌ ಬಳಿ ಸಿಬ್ಬಂದಿಗಾಗಿ ಕೆಲ ನಿಮಿಷ ರೈಲು ನಿಲ್ಲಿಸಲಾಗುತ್ತಿತ್ತು. ಅದನ್ನು ಬದಲಿಸಿ ನೂತನ ಹೂಡಿ ನಿಲ್ದಾಣದಲ್ಲಿ ಒಂದು ನಿಮಿಷ ನಿಲುಗಡೆ ಮಾಡಲು ನಿರ್ಧರಿಸಲಾಗಿದೆ’ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದರು.

‘ಬೆಂಗಳೂರು –ಬಂಗಾರಪೇಟೆ ಮಾರ್ಗವಾಗಿ ಚಲಿಸುವ 12 ಪ್ಯಾಸೆಂಜರ್‌ ರೈಲುಗಳು ಈ ನಿಲ್ದಾಣದಲ್ಲಿ ನಿಲ್ಲುವುದರಿಂದ ಸ್ಥಳೀಯರು ಟ್ರಾಫಿಕ್‌ ಸಮಸ್ಯೆ ಇಲ್ಲದೆ ನಗರ ದಂಡು (ಕಂಟೋನ್ಮೆಂಟ್‌) ಮತ್ತು ಬೈಯಪ್ಪನಹಳ್ಳಿ ರೈಲು ನಿಲ್ದಾಣಗಳಿಗೆ ಸುಲಭವಾಗಿ ಪ್ರಯಾಣಿಸಬಹುದು. ಇನ್ನೂ ಹೆಚ್ಚಿನ ರೈಲುಗಳಿಗೆ ಇಲ್ಲಿ ನಿಲುಗಡೆ ಒದಗಿಸುವ  ಬಗ್ಗೆಯೂ ಮಾತುಕತೆ ನಡೆದಿದೆ’ ಎಂದರು.

* ಕೈಗಾರಿಕಾ ಪ್ರದೇಶಕ್ಕೆ ಕೆಲಸಕ್ಕಾಗಿ ಬರುವ ಜನರು ಸಂಜೆ ಬಸ್‌ಗಳಲ್ಲಿ ಮರಳಲು ತೊಂದರೆಯಾಗುತ್ತಿತ್ತು. ಇದನ್ನು ತಪ್ಪಿಸಲು ರೈಲು ನಿಲ್ದಾಣ ನಿರ್ಮಿಸಬೇಕೆಂದು ಸಾರ್ವಜನಿಕರು ಕೋರಿದ್ದರು.
-ಪಿ.ಸಿ. ಮೋಹನ್‌, ಸಂಸದ
key word :new-train-service-start-bangalore 

No comments:

Post a Comment