Wednesday, September 28, 2016

ನೀರು ಬಿಟ್ಟರೆ ಸರ್ಕಾರದ ವಿರುದ್ಧ ಹೋರಾಟ; ಸಂಘಟನೆಗಳ ಎಚ್ಚರಿಕೆ


ಬೆಂಗಳೂರು: (kannadaevision.in)ಸುಪ್ರೀಂಕೋರ್ಟ್‌ ಮತ್ತೆ ಮೂರು ದಿನ ನೀರು ಹರಿಸುವಂತೆ ನೀಡಿದ ಆದೇಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕನ್ನಡಪರ ಸಂಘಟನೆಗಳು, ಸರ್ಕಾರ ಸದನದಲ್ಲಿ ತೆಗೆದುಕೊಂಡ ತೀರ್ಮಾನಕ್ಕೆ ಬದ್ಧವಾಗಿದ್ದರೆ ಸರ್ಕಾರದ ಬೆಂಬಲಕ್ಕೆ ತಾವು ನಿಲ್ಲುವುದಾಗಿ ಅಭಯ ನೀಡಿವೆ.
ಪ್ರತಿಭಟನೆ, ಮುಷ್ಕರ, ಬಂದ್‌ ಸೇರಿದಂತೆ ಎಲ್ಲ ಪ್ರಯತ್ನ ನಡೆಸಿದರೂ ಪ್ರಯೋಜನವಾಗಿಲ್ಲ. ಅಂತಿಮವಾಗಿ ಸದನದಲ್ಲಿ ಒಕ್ಕೊರಲಿನ ತೀರ್ಮಾನ ಕೈಗೊಳ್ಳಲಾಗಿದೆ. ಅದಕ್ಕೆ ಸರ್ಕಾರ ಬದ್ಧವಾಗಿರಬೇಕು. ಯಾವುದೇ ಕಾರಣಕ್ಕೂ ನೀರು ಹರಿಸಬಾರದು.
ತೀರ್ಪಿಗೆ ಮಣಿದು ನೀರು ಹರಿಸಿದರೆ ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಕನ್ನಡಪರ ಸಂಘಟನೆಗಳ ಮುಖಂಡರು ಸ್ಪಷ್ಟಪಡಿಸಿದ್ದಾರೆ. ಸುಪ್ರೀಂಕೋರ್ಟ್‌ ತೀರ್ಪು ಹೊರಬಿದ್ದ ಬೆನ್ನಲ್ಲೇ ಕರ್ನಾಟಕ ರಕ್ಷಣಾ
ವೇದಿಕೆ (ಪ್ರವೀಣ್‌ಶೆಟ್ಟಿ ಬಣ), ಕನ್ನಡ ಚಳವಳಿ ವಾಟಾಳ್‌ ಪಕ್ಷ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು
ಮಂಗಳವಾರ ಸಂಜೆ ಸಭೆ ನಡೆಸಿದವು.

"ಸದ್ಯದ ಸ್ಥಿತಿಯಲ್ಲಿ ನಮಗೆ ಕುಡಿಯುವ ನೀರು ಮುಖ್ಯವೇ ಹೊರತು, ಆದೇಶ ಪಾಲನೆ ಅಲ್ಲ. ಆದ್ದರಿಂದ ಸರ್ಕಾರ
ತನ್ನ ನಿಲುವಿಗೆ ಬದ್ಧವಾಗಿರಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧವೂ ನಿಲ್ಲಬೇಕಾಗುತ್ತದೆ. ಒಟ್ಟಾರೆ ಸರ್ಕಾರದ
ಸರ್ವಪಕ್ಷ ಸಭೆ ನಂತರ ಮುಂದಿನ ನಡೆ ಬಗ್ಗೆ ತೀರ್ಮಾನಿಸಲಾಗುವುದು' ಎಂದು ಕರವೇ ಮುಖಂಡ ಪ್ರವೀಣ್‌
ಶೆಟ್ಟಿ ತಿಳಿಸಿದರು.

ರೈತರ ಬೆಂಬಲಕ್ಕೆ ಕಸಾಪ: "ಕನ್ನಡ ಸಾಹಿತ್ಯ ಪರಿಷತ್ತು ಯಾವತ್ತಿದ್ದರೂ ರೈತರ ಬೆಂಬಲಕ್ಕೆ ಇರುತ್ತದೆ. ರೈತರ ಪರ
ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ನಮ್ಮ ಬೆಂಬಲ ಇದೆ. ಮುಂದಿನ ಕನ್ನಡದ ನೆಲ-ಜಲ ರಕ್ಷಣೆಗೆ ಸಂಬಂಧಿಸಿದ ಹೋರಾಟಕ್ಕೆ ಬದ್ಧವಾಗಿರುತ್ತೇವೆ' ಎಂದು ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ ಸ್ಪಷ್ಟಪಡಿಸಿದ್ದಾರೆ.

ನೀರು ಬಿಟ್ಟರೆ ಜನರಿಗೆ ದ್ರೋಹ:
ಒಂದು ಕ್ಯುಸೆಕ್‌ ನೀರನ್ನೂ ಬಿಡಲು ಸಾಧ್ಯವಿಲ್ಲದ ಸಂಕಷ್ಟದ ಪರಿಸ್ಥಿತಿಯಲ್ಲಿ ಕರ್ನಾಟಕ ಇದೆ. ಇದೇ ಕಾರಣಕ್ಕೆ
ಸದನದಲ್ಲಿ ಕಾವೇರಿ ಕುಡಿಯಲು ಮಾತ್ರ ಬಳಸಬೇಕು ಎಂಬ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ. ನೀರು ಬಿಡದೆಯೇ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿ ಕೊಡಬೇಕು. ನಿರ್ಣಯ ಮೀರಿ ನೀರು ಬಿಟ್ಟರೆ ಸರ್ಕಾರ ರಾಜ್ಯದ ಜನರಿಗೆ ದ್ರೋಹ ಮಾಡಿದಂತಾಗುತ್ತದೆ. ನೀರು ಹರಿಸಿದರೆ ಮತ್ತೆ ಬೀದಿಗಿಳಿಯಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ
ರಾಜ್ಯ ಘಟಕದ ಅಧ್ಯಕ್ಷ ಟಿ.ಎ. ನಾರಾಯಣಗೌಡ ಎಚ್ಚರಿಸಿದ್ದಾರೆ.

ಪ್ರಧಾನಿ ಮೌನ ಖಂಡನೀಯ- ವಾಟಾಳ್‌: "ನಾವೇನೂ ನೀರನ್ನು ಜಲಾಶಯಗಳಲ್ಲಿ ಕದ್ದು ಇಟ್ಟುಕೊಂಡಿಲ್ಲ. ಎಲ್ಲವೂ ಮುಕ್ತವಾಗಿದೆ. ಪರಿಸ್ಥಿತಿಯನ್ನು ನೋಡಿಯೂ ಈ ರೀತಿ ಆದೇಶ ಒಳ್ಳೆಯದಲ್ಲ. ಈ ಮಧ್ಯೆ ಪ್ರಧಾನಿ ಮೌನ ವಹಿಸಿರುವುದು ಖಂಡನೀಯ. ಎಲ್ಲ ರಾಜ್ಯಗಳನ್ನೂ ಸಮನಾಗಿ ನೋಡಬೇಕಾದ ಪ್ರಧಾನಿ, ಸಮಸ್ಯೆ ಬಂದಾಗ ಬಗೆಹರಿಸುವ ಪ್ರಯತ್ನ ಮಾಡಬೇಕು. ಬುಧವಾರ ನಡೆಯುವ ಸರ್ವಪಕ್ಷ ಸಭೆಯ ತೀರ್ಮಾನದ ಬಳಿಕ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು' ಎಂದು ವಾಟಾಳ್‌ ನಾಗರಾಜ್‌ ತಿಳಿಸಿದ್ದಾರೆ.
key word: kaveri water revolution- bangalore-harthal



No comments:

Post a Comment