Saturday, October 1, 2016

ಜಯಲಲಿತಾ ಆರೋಗ್ಯ ತಪಾಸಣೆಗೆ ಇಂಗ್ಲೆಂಡ್ ವೈದ್ಯ

ಚೆನ್ನೈ:(kannadaevision.in) ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಆರೋಗ್ಯ ತಪಾಸಣೆಗೆ ಇಂಗ್ಲೆಂಡ್ ನಿಂದ ವಿಶೇಷ ವೈದ್ಯರನ್ನು ಕರೆಸಲಾಗಿದೆ ಎಂಬ ಸುದ್ದಿಗಳು ಕೇಳಿಬಂದಿವೆ. ಆದರೆ ಜಯಲಲಿತಾ ಅವರ ಆರೋಗ್ಯ ಸ್ಥಿತಿಯ ಬಗ್ಗೆ ರಾಜ್ಯ ಸರ್ಕಾರವಾಗಲಿ, ಅಪೋಲೋ ಆಸ್ಪತ್ರೆಯಾಗಲಿ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. 
ವರದಿಗಳ ಪ್ರಕಾರ ಬ್ರಿಟಿಷ್ ವೈದ್ಯ ರಿಚರ್ಡ್ ಜಾನ್ ಬೇಲೆ ಶುಕ್ರವಾರ ಅಪೋಲೋ ಆಸ್ಪತ್ರೆಯಲ್ಲಿ ಜಯಲಲಿತಾ ಆರೋಗ್ಯವನ್ನು ತಪಾಸಣೆ ಮಾಡಿದ್ದಾರೆ. 
ಜಯಲಲಿತಾ ಅವರ ಆರೋಗ್ಯದ ಬಗ್ಗೆ ಹಲವಾರು ವದಂತಿಗಳು ಹರಿದಾಡುತ್ತಿದ್ದು, ಅಧಿಕೃತ ಹೇಳಿಕೆಗಾಗಿ ಎಲ್ಲರು ಕಾಯುತ್ತಿದ್ದಾರೆ. ಶುಕ್ರವಾರ ಯಾವುದೇ ಹೇಳಿಕೆ ನೀಡದ ಅಪೋಲೋ ಆಸ್ಪತ್ರೆ ಇಂದು ಅವರ ಆರೋಗ್ಯ ಸ್ಥಿತಿಯ ಬಗ್ಗೆ ಹೇಳಿಕೆ ನೀಡುವ ಸಾಧ್ಯತೆಯಿದೆ. 
ಸೆಪ್ಟೆಂಬರ್ 22 ರಂದು ಜ್ವರ ಮತ್ತು ದೇಹದಲ್ಲಿ ನೀರಿನ ಅಂಶದ ಕೊರೆತೆಗಾಗಿ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೆಲವು ದಿನಗಳ ನಂತರ ಜ್ವರದಿಂದ ಮುಖ್ಯಮಂತ್ರಿಗಳು ಗುಣಮುಖರಾಗಿದ್ದು, ವೀಕ್ಷಣೆಯಲ್ಲಿ ಇಡಲಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ಹೇಳಿದ್ದರು. 
ಈಮಧ್ಯೆ ಇದಕ್ಕೆ ಪ್ರತಿಕ್ರಿಯಿಸಿರುವ ಡಿಎಂಕೆ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ, ಜಯಲಲಿತಾ ಅವರು ಶೀಘ್ರ ಗುಣಮುಖರಾಗಲೆಂದು ಹಾರೈಸಿದ್ದು, ಅವರ ಆರೋಗ್ಯ ಸ್ಥಿತಿಯ ಬಗ್ಗೆ ಸರ್ಕಾರ ಹೇಳಿಕೆ ನೀಡಿ ವದಂತಿಗಳಿಗೆ ತಡೆ ಹಾಕಬೇಕೆಂದು ತಿಳಿಸಿದ್ದಾರೆ. 
"ಜಯಲಲಿತಾ ಅವರ ಆರೋಗ್ಯ ಸ್ಥಿತಿಯನ್ನು ಬಹಳ ಗುಟ್ಟಾಗಿ ಇಟ್ಟಿರುವುದರಿಂದ ಅದರ ಬಗ್ಗೆ ಕೆಲವರು ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ" ಎಂದು ಕರುಣಾನಿಧಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕನಿಷ್ಠ ಪಕ್ಷ ಕಾವೇರಿ ನದಿ ವಿವಾದದ ಬಗ್ಗೆ ರಾಜ್ಯ ಅಧಿಕಾರಿಗಳ ಜೊತೆಗೆ ಜಯಲಲಿತಾ ಆಸ್ಪತ್ರೆಯಲ್ಲೇ ಸಭೆ ನಡೆಸಿದ್ದಾರೆ ಎನ್ನಲಾದ ಫೋಟೋಗಳನ್ನಾದರೂ ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕಿತ್ತು ಎಂದು ಕರುಣಾನಿಧಿ ಹೇಳಿದ್ದಾರೆ. 
ಈಮಧ್ಯೆ ಸುಳ್ಳುವದಂತಿಗಳನ್ನು ಹರಡುತ್ತಿರುವವರ ವಿರುದ್ಧ ತಮಿಳುನಾಡು ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. 
keyword: jayalalitha-treatment-england-doctor

No comments:

Post a Comment