Tuesday, October 4, 2016

ಬೆಂಗಳೂರು ಮೇಲ್ಸೇತುವೆ ಸಂಚಾರಕ್ಕೆ ಮುಕ್ತ



ಬೆಂಗಳೂರು: (kannadaevision.in)ರಿಚ್ಮಂಡ್‌ ವೃತ್ತದ ಮೇಲ್ಸೇತುವೆಯ ಎರಡನೇ ಹಂತದ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಸೋಮವಾರದಿಂದ ವಾಹನಗಳ ಸಂಚಾರ ಆರಂಭಗೊಂಡಿದೆ. ದುರಸ್ತಿ ಕಾಮಗಾರಿ ನಡೆಸುವ ಉದ್ದೇಶದಿಂದ ಶಾಂತಿನಗರದ ಜೋಡಿ ರಸ್ತೆ ಹಾಗೂ ಮಿಷನ್‌ ರಸ್ತೆಯಿಂದ ಆರಂಭವಾಗಿ ರೆಸಿಡೆನ್ಸಿ ರಸ್ತೆಯಲ್ಲಿ ಕೊನೆಗೊಳ್ಳುವ ಮೇಲ್ಸೇತುವೆಯಲ್ಲಿ ಸೆಪ್ಟೆಂಬರ್‌ 21ರಿಂದ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ರಸ್ತೆಗೆ ಟಾರ್‌ ಶೀಟ್‌ಗಳನ್ನು ಅಳವಡಿಸಿದ ಬಳಿಕ ಡಾಂಬರು ಹಾಕಲಾಗಿದೆ. ಕಾಮಗಾರಿ ಪೂರ್ಣಗೊಂಡಿದ್ದು, ಈ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಗುಂಡಿ ಬಿದ್ದು ಹಾಳಾಗಿದ್ದ ರಿಚ್ಮಂಡ್‌ ಮೇಲ್ಸೇತುವೆಯ ದುರಸ್ತಿ ಕಾಮಗಾರಿಗೆ ಸೆಪ್ಟೆಂಬರ್ 1ರಂದು ಚಾಲನೆ ನೀಡಲಾಗಿತ್ತು. ಮೊದಲ ಹಂತವಾಗಿ ರಿಚ್ಮಂಡ್ ರಸ್ತೆಯಿಂದ ಆರಂಭವಾಗಿ ಜೋಡಿ ರಸ್ತೆಯಲ್ಲಿ ಕೊನೆಯಾಗುವ ಮೇಲ್ಸೇತುವೆಯ ಕಾಮಗಾರಿ ಪೂರ್ಣಗೊಳಿಸಿ ಸೆಪ್ಟೆಂಬರ್‌ 21ರಂದು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಬಳಿಕ ಎರಡನೇ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.

ಒಟ್ಟು ₹1.53  ಕೋಟಿ ವೆಚ್ಚದಲ್ಲಿ ದುರಸ್ತಿ ಕಾಮಗಾರಿ ನಡೆಸಿದ್ದು, 40 ದಿನಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಲಾಗಿತ್ತು. ಆದರೆ, 32 ದಿನಗಳೊಳಗೆ ಕಾಮಗಾರಿಯನ್ನು ಮುಗಿಸಲಾಗಿದೆ. ‘ದುರಸ್ತಿ ಕಾಮಗಾರಿಯಿಂದಾಗಿ ರಿಚ್ಮಂಡ್‌ ರಸ್ತೆಯಿಂದ ಶಾಂತಿನಗರದ ಕಡೆಗೆ ಹಾಗೂ ಶಾಂತಿನಗರ ಮತ್ತು ಮಿಷನ್‌ ರಸ್ತೆ ಕಡೆಯಿಂದ ರೆಸಿಡೆನ್ಸಿ ರಸ್ತೆ ಕಡೆಗೆ ಹೋಗುವ ವಾಹನಗಳು ಕೆಳಗಿನ ರಸ್ತೆಯಲ್ಲೇ ಹಾದು ಹೋಗುತ್ತಿದ್ದವು. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಈಗ ಸಂಚಾರ ದಟ್ಟಣೆ ಸ್ವಲ್ಪ ಕಡಿಮೆ ಆಗಿದೆ’ ಎಂದು ಅಶೋಕ ನಗರ ಸಂಚಾರ ಠಾಣೆ ಇನ್‌ಸ್ಪೆಕ್ಟರ್‌ ಮಹಮ್ಮದ್‌ ಸಿರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಿಚ್ಮಂಡ್‌ ಮೇಲ್ಸೇತುವೆ ಕಾಮಗಾರಿಯನ್ನು ನಿಗದಿತ ಅವಧಿಗಿಂತ ಮುಂಚಿತವಾಗಿಯೇ ಪೂರ್ಣಗೊಳಿಸಲಾಗಿದೆ. ಆದರೆ, ರಿಚ್ಮಂಡ್‌ ರಸ್ತೆಯಲ್ಲಿ ಟೆಂಡರ್‌ ಶ್ಯೂರ್‌ ಕಾಮಗಾರಿ ನಡೆಸಲಾಗುತ್ತಿದೆ. ಈ ತಿಂಗಳಾಂತ್ಯಕ್ಕೆ ಕಾಮಗಾರಿ ಮುಗಿಯುವ ಉದ್ದೇಶವಿದೆ. ಅದು ಮುಗಿದರೆ ವಾಹನ ಸವಾರರಿಗೆ ಅನುಕೂಲವಾಗಲಿದೆ’ ಎಂದರು.
key word: bangalore-flyover-work

No comments:

Post a Comment