Tuesday, October 4, 2016

ಬೆಂಗಳೂರು ಮೇಲ್ಸೇತುವೆ ಸಂಚಾರಕ್ಕೆ ಮುಕ್ತ



ಬೆಂಗಳೂರು: (kannadaevision.in)ರಿಚ್ಮಂಡ್‌ ವೃತ್ತದ ಮೇಲ್ಸೇತುವೆಯ ಎರಡನೇ ಹಂತದ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಸೋಮವಾರದಿಂದ ವಾಹನಗಳ ಸಂಚಾರ ಆರಂಭಗೊಂಡಿದೆ. ದುರಸ್ತಿ ಕಾಮಗಾರಿ ನಡೆಸುವ ಉದ್ದೇಶದಿಂದ ಶಾಂತಿನಗರದ ಜೋಡಿ ರಸ್ತೆ ಹಾಗೂ ಮಿಷನ್‌ ರಸ್ತೆಯಿಂದ ಆರಂಭವಾಗಿ ರೆಸಿಡೆನ್ಸಿ ರಸ್ತೆಯಲ್ಲಿ ಕೊನೆಗೊಳ್ಳುವ ಮೇಲ್ಸೇತುವೆಯಲ್ಲಿ ಸೆಪ್ಟೆಂಬರ್‌ 21ರಿಂದ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ರಸ್ತೆಗೆ ಟಾರ್‌ ಶೀಟ್‌ಗಳನ್ನು ಅಳವಡಿಸಿದ ಬಳಿಕ ಡಾಂಬರು ಹಾಕಲಾಗಿದೆ. ಕಾಮಗಾರಿ ಪೂರ್ಣಗೊಂಡಿದ್ದು, ಈ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಗುಂಡಿ ಬಿದ್ದು ಹಾಳಾಗಿದ್ದ ರಿಚ್ಮಂಡ್‌ ಮೇಲ್ಸೇತುವೆಯ ದುರಸ್ತಿ ಕಾಮಗಾರಿಗೆ ಸೆಪ್ಟೆಂಬರ್ 1ರಂದು ಚಾಲನೆ ನೀಡಲಾಗಿತ್ತು. ಮೊದಲ ಹಂತವಾಗಿ ರಿಚ್ಮಂಡ್ ರಸ್ತೆಯಿಂದ ಆರಂಭವಾಗಿ ಜೋಡಿ ರಸ್ತೆಯಲ್ಲಿ ಕೊನೆಯಾಗುವ ಮೇಲ್ಸೇತುವೆಯ ಕಾಮಗಾರಿ ಪೂರ್ಣಗೊಳಿಸಿ ಸೆಪ್ಟೆಂಬರ್‌ 21ರಂದು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಬಳಿಕ ಎರಡನೇ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.

ಒಟ್ಟು ₹1.53  ಕೋಟಿ ವೆಚ್ಚದಲ್ಲಿ ದುರಸ್ತಿ ಕಾಮಗಾರಿ ನಡೆಸಿದ್ದು, 40 ದಿನಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಲಾಗಿತ್ತು. ಆದರೆ, 32 ದಿನಗಳೊಳಗೆ ಕಾಮಗಾರಿಯನ್ನು ಮುಗಿಸಲಾಗಿದೆ. ‘ದುರಸ್ತಿ ಕಾಮಗಾರಿಯಿಂದಾಗಿ ರಿಚ್ಮಂಡ್‌ ರಸ್ತೆಯಿಂದ ಶಾಂತಿನಗರದ ಕಡೆಗೆ ಹಾಗೂ ಶಾಂತಿನಗರ ಮತ್ತು ಮಿಷನ್‌ ರಸ್ತೆ ಕಡೆಯಿಂದ ರೆಸಿಡೆನ್ಸಿ ರಸ್ತೆ ಕಡೆಗೆ ಹೋಗುವ ವಾಹನಗಳು ಕೆಳಗಿನ ರಸ್ತೆಯಲ್ಲೇ ಹಾದು ಹೋಗುತ್ತಿದ್ದವು. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಈಗ ಸಂಚಾರ ದಟ್ಟಣೆ ಸ್ವಲ್ಪ ಕಡಿಮೆ ಆಗಿದೆ’ ಎಂದು ಅಶೋಕ ನಗರ ಸಂಚಾರ ಠಾಣೆ ಇನ್‌ಸ್ಪೆಕ್ಟರ್‌ ಮಹಮ್ಮದ್‌ ಸಿರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಿಚ್ಮಂಡ್‌ ಮೇಲ್ಸೇತುವೆ ಕಾಮಗಾರಿಯನ್ನು ನಿಗದಿತ ಅವಧಿಗಿಂತ ಮುಂಚಿತವಾಗಿಯೇ ಪೂರ್ಣಗೊಳಿಸಲಾಗಿದೆ. ಆದರೆ, ರಿಚ್ಮಂಡ್‌ ರಸ್ತೆಯಲ್ಲಿ ಟೆಂಡರ್‌ ಶ್ಯೂರ್‌ ಕಾಮಗಾರಿ ನಡೆಸಲಾಗುತ್ತಿದೆ. ಈ ತಿಂಗಳಾಂತ್ಯಕ್ಕೆ ಕಾಮಗಾರಿ ಮುಗಿಯುವ ಉದ್ದೇಶವಿದೆ. ಅದು ಮುಗಿದರೆ ವಾಹನ ಸವಾರರಿಗೆ ಅನುಕೂಲವಾಗಲಿದೆ’ ಎಂದರು.
key word: bangalore-flyover-work

Monday, October 3, 2016

ದಸರಾ ಪ್ರತಿಕೃತಿಗಳೊಂದಿಗೆ ಸೆಲ್ಫಿಗೆೆ ವಿದೇಶಿ ಪ್ರಯಾಣಿಕರು ದುಂಬಾಲು ವಿಮಾನ ನಿಲ್ದಾಣದಲ್ಲಿ ದಸರಾ ಸಾಂಸ್ಕೃತಿಕ ಮೆರಗು



ದೇವನಹಳ್ಳಿ :(kannadaevision.in) ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡ ನಂತರ ಪ್ರತಿ ವರ್ಷ ನಾಡಿನ ಸಾಂಸ್ಕೃತಿಕ ಪರಂಪರೆಯೊಂದಿಗೆ ದಸರಾ ಉತ್ಸವಕ್ಕೆ ಈ ಬಾರಿ ಅದ್ದೂರಿಯಾಗಿ ಚಾಲನೆ ನೀಡಿದೆ.

ರಾಜ್ಯದೆಲ್ಲೆಡೆ ದಸರಾ ನಾಡ ಹಬ್ಬಕ್ಕೆ ಮೈಸೂರು ಸೇರಿದಂತೆ ವಿವಿಧೆಡೆ ಚಾಲನೆಯಾಗುತ್ತಿದೆ. 9 ದಿನಗಳ ಸಂಭ್ರಮದಲ್ಲಿ ಬೆಂಗಳೂರು ಮೈಸೂರು ಸೇರಿದಂತೆ ವಿವಿಧ ರಾಜ್ಯಗಳಿಗೆ ತೆರಳಲು ಬಂದು ಹೋಗುತ್ತಿರುವ ವಿದೇಶಿಯರಿಗೆ ದಸರಾ ಹಬ್ಬದ ಸ್ವಾಗತ ನೀಡಲು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ.

ಇದಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೆಐಎಎಲ್ ಸಂಸ್ಥೆ ನಾಡಿನ ಇತಿಹಾಸ ಪರಂಪರೆ ಸಾರುವ ಸ್ಮಾರಕ, ಜನಪದ ನೃತ್ಯ ಪ್ರಕಾರಗಳ ಭಿತ್ತಿಚಿತ್ರಗಳಿಗೆ ದೀಪಾಲಂಕಾರ, ಲೇಸರ್‌ ಶೋ, ಅಳವಡಿಸಿದೆ. ಆ ಮೂಲಕ ದೇಶ, ವಿದೇಶಿಯರಿಗೆ ರೋಮಾಂಚನಗೊಳಿಸುತ್ತದೆ. ಇದನ್ನು ನೋಡಿದ ವಿದೇಶಿ ಪ್ರಯಾಣಿಕರು ನೃತ್ಯ ತಂಡದೊಂದಿಗೆ ಸೆಲ್ಫಿ ಛಾಯಾಚಿತ್ರಕ್ಕೆ ದುಂಬಾಲು ಬೀಳುತ್ತಿದ್ದಾರೆ.

ಎರಡು ಬಾರಿ ದೇಶದಲ್ಲೆ ಅತ್ಯುತ್ತಮ ಹಸಿರೀಕರಣ ವಿಮಾನ ನಿಲ್ದಾಣ ಪುರಸ್ಕಾರಕ್ಕೆ ಪಾತ್ರವಾಗಿರುವ ವಿಮಾನ ನಿಲ್ದಾಣ ಆವರಣದಲ್ಲಿ ಆನೆಯ ಮೇಲೆ ಅಂಬಾರಿ, ಮೈಸೂರು ಅರಮನೆಯಂತೆ  ಕಂಗೊಳಿಸುವಂತೆ ಮಾಡಿರುವ ವಿದ್ಯುತ್ ದೀಪಗಳ ಅಲಂಕಾರಗಳು ಎದ್ದು ಕಾಣುತ್ತಿವೆ.

ದತ್ತಣ್ಣ ಚಾಲನೆ:  ಚಿತ್ರನಟ ದತ್ತಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಜಿಲ್ಲಾಧಿಕಾರಿ ಪಾಲಯ್ಯ, ಕೆಐಎಎಲ್ ಸಂಸ್ಥೆ ನಿರ್ದೇಶಕ ಭಾಸ್ಕರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
Keyword: dasara-celebration-airport

ವಿಧಾನ ಸಭೆ ವಿಶೇಷ ಅಧಿವೇಶನ ಆರಂಭ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಆದೇಶದ ಮರು ಪರಿಶೀಲನೆಗೆ ಕೇಂದ್ರದ ಅರ್ಜಿ

ಬೆಂಗಳೂರು: (kannadaevision.in)ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಸಂಬಂಧಿಸಿದಂತೆ ಆದೇಶ ಮರು ಪರಿಶೀಲನೆ ಕೋರಿ ಅಟಾರ್ನಿ ಜನರಲ್ ಸುಪ್ರೀಂ ಕೋರ್ಟ್‌ಗೆ  ಮನವಿ ಮಾಡಿದ್ದಾರೆ.
ಅಕ್ಟೋಬರ್ 4ರೊಳಗೆ ಕಾವೇರಿ ನಿರ್ವಹಣಾ  ಮಂಡಳಿ ರಚಿಸುವಂತೆ ಸುಪ್ರೀಂ ಕೋರ್ಟ್ ಸೆಪ್ಟೆಂಬರ್‌ 30ರಂದು ನೀಡಿದ್ದ ಆದೇಶಕ್ಕೆ ಆಟಾರ್ನಿ ಜನರಲ್‌ ಮುಕುಲ್ ರೋಹ್ಟಗಿ ಒಪ್ಪಿಗೆ ಸೂಚಿಸಿದ್ದರು. ಇದೀಗ ಆದೇಶ ಮರು ಪರಿಶೀಲಿಸುವಂತೆ ಕೋರಿ ಕೇಂದ್ರ ಸರ್ಕಾರದಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.

ಅಟಾರ್ನಿ ಜನರಲ್‌ ನೀಡಿರುವ ಅರ್ಜಿ ವಿಚಾರಣೆಯನ್ನು ಮಂಗಳವಾರ ನಡೆಸುವುದಾಗಿ ಸುಪ್ರೀಂ ಕೋರ್ಟ್‌ ನಿಗದಿ ಪಡಿಸಿದೆ. ಶಾಸನ ಸಭೆ ರಚನೆ ಸಂಸತ್ತಿನ ಜವಾಬ್ದಾರಿಯಾಗಿದೆ ಎನ್ನುವ ಕಾರಣ ನೀಡಲಾಗಿದೆ.

ವಿಧಾನಸಭೆ ವಿಶೇಷ ಅಧಿವೇಶನ
ಕಾವೇರಿ ನೀರು ಹಂಚಿಕೆ ಕುರಿತಾದ ಚರ್ಚೆಗಾಗಿ ರಾಜ್ಯ ವಿಧಾನ ಮಂಡಲದ ವಿಶೇಷ ಅಧಿವೇಶನ ಆರಂಭವಾಗಿದೆ. ಅಧಿವೇಶನವಲ್ಲಿ ಚರ್ಚೆಯಾಗಲಿರುವ ವಿಷಯ ಸೇರಿದಂತೆ ಸೆ.30ರಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಸದನದಲ್ಲಿ ಓದಿ ತಿಳಿಸಿದರು.

ಕಾವೇರಿ ನೀರು ನಿರ್ವಹಣಾ ಮಂಡಳಿ ರಚೆನೆ ಹಾಗೂ ಅಕ್ಟೋಬರ್ 6ರವರೆಗೂ 36 ಸಾವಿರ ಕ್ಯೂಸೆಕ್‌ ನೀರು ಹರಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ.
*
ಇಡೀ ಸದನ ಪಕ್ಷ ಭೇದ ಮರೆತು ಎಚ್‌.ಡಿ.ದೇವೇಗೌಡರಿಗೆ ಋಣಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೂ ಧನ್ಯವಾದ...ಈ ನಾಯಕರನ್ನು ಒಂದು ಪಕ್ಷಕ್ಕೆ ಸೀಮಿತಗೊಳಿಸಬಾರದು.
–ರಮೇಶ್ ಕುಮಾರ್‌, ಸಚಿವ
keyword: kaveri-water-problem

Saturday, October 1, 2016

ಕಾವೇರಿ ವಿವಾದ: ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಸಿಎಂ

ಮೈಸೂರು:(kannadaevision.in) ತಮಿಳುನಾಡಿಗೆ ಮತ್ತೆ 32 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಇಂದು ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದ ನಂತರ ಸಮಾರಂಭದಲ್ಲಿ ಮಾತನಾಡಿದ ಸಿಎಂ, ನಮ್ಮ ಜಲಾಶಯಗಳಲ್ಲಿ ನೀರಿಲ್ಲ. ಹೀಗಾಗಿ ಸೆಪ್ಟೆಂಬರ್ 27ರ ಆದೇಶವನ್ನು ನಾವು ಪಾಲಿಸಲಿಲ್ಲ. ಈಗ ಮತ್ತೆ 6 ದಿನ ನೀರು ಬಿಡುವಂತೆ ಕೋರ್ಟ್ ಆದೇಶಿಸಿರುವುದರಿಂದ ರಾಜ್ಯದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ. ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಪದೇಪದೆ ಅನ್ಯಾಯವಾಗುತ್ತಿದೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು. 
ನಮಗೆ ಕುಡಿಯಲು ನೀರಿಲ್ಲ. ಆದರೆ ತಮಿಳುನಾಡು ಬೆಳೆಗಳಿಗೆ ನೀರು ಕೇಳುತ್ತಿದೆ. ನಮ್ಮ ರಾಜ್ಯದಲ್ಲಿ ಯಾವುದೇ ಮಳೆ ಮಾರುತಗಳಿಲ್ಲ. ಆದರೆ ತಮಿಳುನಾಡಿನಲ್ಲಿ ಇನ್ನೂ ಮಳೆ ಮಾರುತಗಳಿವೆ ಎಂದರು.
ಇದೇ ವೇಳೆ ಕಾವೇರಿ ಬಿಕ್ಕಟ್ಟು ಬಗೆಹರಿಯಲಿ, ರಾಜ್ಯಕ್ಕೆ ನ್ಯಾಯ ಸಿಗಲಿ ಎಂದು ನಾಡದೇವತೆ ಚಾಮುಂಡೇಶ್ವರಿ ಬಳಿ ಪ್ರಾರ್ಥನೆ ಮಾಡಿರುವುದಾಗಿ ಸಿಎಂ ತಿಳಿಸಿದರು,
ನಿನ್ನೆ ಸುಪ್ರೀಂ ಕೋರ್ಟ್ ಇಂದಿನಿಂದ ಮತ್ತೆ 6 ದಿನ ನಿತ್ಯ 6 ಸಾವಿರ ಕ್ಯೂಸೆಕ್ ನಂತೆ ಒಟ್ಟು 36 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಆದರೆ ತಮಿಳುನಾಡಿಗೆ ನೀರು ಬಿಡುವ ಬಗ್ಗೆ ಸಿಎಂ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಕುರಿತು ಚರ್ಚಿಸಲು ಇಂದು ಮಧ್ಯಾಹ್ನ ಸರ್ವಪಕ್ಷ ಸಭೆ ಕರೆದಿದ್ದು, ಸಭೆಯ ಬಳಿಕ ಸಂಜೆ 6 ಗಂಟೆ ಸಂಪುಟ ಸಭೆ ನಡೆಸಿ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ.
keyword: mysuru-dasara -inauguration

ಅತ್ತಿಬೆಲೆ ಗಡಿವರೆಗೆ ಮಾತ್ರ ಬಸ್‌



ಆನೇಕಲ್‌:(kannadaevision.in)ತಮಿಳುನಾಡಿಗೆ ಅಕ್ಟೋಬರ್ 1ರಿಂದ 6ರವರೆಗೆ ಆರು ಸಾವಿರ ಕ್ಯುಸೆಕ್‌  ಕಾವೇರಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಕಾರಣ ಕರ್ನಾಟಕದ ಗಡಿಭಾಗ ಅತ್ತಿಬೆಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಗಡಿಯಲ್ಲಿ ಭದ್ರತೆಯನ್ನು ಪೊಲೀಸರು ಬಿಗಿಗೊಳಿಸಿದ್ದಾರೆ. ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಮೀಸಲು ಪಡೆ ಹಾಗೂ ಕ್ಷಿಪ್ರ ಕಾರ್ಯ ಪಡೆ ಗಡಿಯಲ್ಲಿ ಬೀಡು ಬಿಟ್ಟಿದೆ. ಡಿವೈಎಸ್ಪಿ ಎಸ್.ಕೆ.ಉಮೇಶ್ ಅವರ ನೇತೃತ್ವದಲ್ಲಿ ತಮ್ಮನ್ನು ಭದ್ರತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಕಟ್ಟೆಚ್ಚರ ವಹಿಸಲಾಗಿದೆ. ಕರ್ನಾಟಕ ಮತ್ತು ತಮಿಳುನಾಡು ಸಾರಿಗೆ ಸಂಸ್ಥೆಯ ಬಸ್ಸುಗಳು ತಮ್ಮ ರಾಜ್ಯಗಳ ಗಡಿಭಾಗದವರೆಗೆ ಸಂಚರಿಸಿ ಪ್ರಯಾಣಿಕರನ್ನು ಇಳಿಸಿದ ನಂತರ ಪ್ರಯಾಣಿಕರ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತಿದ್ದಾರೆ.
keyword: bangalore-kaveri-water-prblm

ಇಂದಿನಿಂದ ವಿಶ್ವ ವಿಖ್ಯಾತ ಮೈಸೂರು ದಸರಾ: ರಂಗಿನೋಕುಳಿಯಲ್ಲಿ ಮಿಂದೆದ್ದ ಸಾಂಸ್ಕೃತಿಕ ನಗರಿ

ಮೈಸೂರು/ ಮಂಡ್ಯ: (kannadaevision.in)ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಚಾಲನೆ ದೊರೆಯಲಿದೆ. ಸಾಂಸ್ಕೃತಿಕ ನಗರಿ ಮೈಸೂರಿನ ಎಲ್ಲಾ ರಸ್ತೆಗಳು ಮಧುವಣಗಿತ್ತಿಯಂತೆ ಸಿಂಗಾರಗೊಂಡಿವೆ, ರಾಜಮಾರ್ಗ ಸೇರಿದಂತೆ ಎಲ್ಲಾ ರಸ್ತೆಗಳು ರಂಗೇರಿವೆ. ಪಾರಂಪರಿಕ ಕಟ್ಟಟಗಳಿಗೆ ಆಕರ್ಷಕವಾಗಿ ಶೃಂಗಾರ ಮಾಡಲಾಗಿದೆ. ಎಲ್ಲಾ ಸರ್ಕಾರಿ ಕಟ್ಟಡಗಳು ಮತ್ತು ವೃತ್ತಗಳು ಸಿಂಗಾರಗೊಂಡು ವೈಭವದ ದಸರಾ ಆಚರಿಸಲು ಸಿದ್ದಗೊಂಡಿವೆ.


ಬಸವೇಶ್ವರ ವೃತ್ತದಲ್ಲಿ ಜಯಚಾಮರಾಜ ಒಡೆಯರ್, ಪಾಠಶಾಲಾದಲ್ಲಿ ಗಂಡಭೇರುಂಡ, ಕುರುಬರಹಳ್ಳಿ ವೃತ್ತದಲ್ಲಿ ಚಾಮುಂಡೇಶ್ವರಿ, ರೈಲ್ವೆ ನಿಲ್ದಾಣದಲ್ಲಿ ವಿಧಾನ ಸೌಧ ಮತ್ತು ಸಂಸತ್ ನ ಪ್ರತಿಕೃತಿಗಳು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿವೆ.


ಸಯ್ಯಾಜಿ ರಾವ್ ರಸ್ತೆಯಲ್ಲಿ ಹಸಿರು ಚಪ್ಪರ ಎಲ್ಲರ ಕಣ್ಮನ ಸೂರೆಗೊಳ್ಳುತ್ತಿದೆ. ಜಗಮಗಿಸುವ ಲೈಟ್ ನಲ್ಲಿ ಪ್ರವಾಸಿಗರು ಸೆಲ್ಪೀ ತೆಗೆದುಕೊಳ್ಳಲು ತೊಡಗಿದ್ದಾರೆ. ಈ ಬಾರಿ ಮೈಸೂರಿನ ಎಲ್ಲಾ ರಸ್ತೆಗಳು ವರ್ಣರಂಜಿತ ಕಲರ್ ಫುಲ್ ಎಲ್ ಇಡಿ ಬಲ್ಬ್ ಗಳಿಂದ ಕಂಗೊಳಿಸುತ್ತಿವೆ.


ಮೈಸೂರು ಚಾಮುಂಡಿಬೆಟ್ಟದಲ್ಲಿ ಶನಿವಾರ ಬೆಳಗ್ಗೆ 11.40ರಿಂದ ಸಲ್ಲುವ ಧನುರ್‌ ಲಗ್ನದಲ್ಲಿ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆ ಸಲ್ಲಿಸುವ ಮೂಲಕ ದಸರಾ ಮಹೋತ್ಸವಕ್ಕೆ ಚೆನ್ನವೀರ ಕಣವಿ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತರಿರಲಿದ್ದು, ಮುಖ್ಯ ಅತಿಥಿಗಳಾಗಿ ಸಚಿವರಾದ ಡಾ.ಎಚ್‌.ಸಿ.ಮಹದೇವಪ್ಪ, ಮಹದೇವಪ್ರಸಾದ್‌, ತನ್ವೀರ್‌ ಸೇಠ್, ಉಮಾಶ್ರೀ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.


ಇದೇ ವೇಳೆ ದಸರಾ ಕ್ರೀಡಾಕೂಟ, ಕುಸ್ತಿ ಪಂದ್ಯಾವಳಿ, ಆಹಾರ ಮೇಳ, ಫ‌ಲಪುಷ್ಪ ಪ್ರದರ್ಶನ, ವಸ್ತು ಪ್ರದರ್ಶನ, ಯುವ ದಸರಾ ಸೇರಿದಂತೆ ವಿವಿಧ ಕಾರ್ಯಕ್ರಮಗಳೂ ಶನಿವಾರವೇ ಉದ್ಘಾಟನೆಗೊಳ್ಳಲಿವೆ.


ಒಂಬತ್ತು ದಿನಗಳ ಕಾಲ ನವರಾತ್ರಿ ಉತ್ಸವ ನಡೆಯಲಿದ್ದು, ಪ್ರತಿನಿತ್ಯ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್‌ 11ಕ್ಕೆ ಮಧ್ಯಾಹ್ನ 2.14ಕ್ಕೆ ಜಂಬೂ ಸವಾರಿ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ. ಅಂದು ರಾತ್ರಿ ಪಂಜಿನ ಕವಾಯತ್‌ ನಡೆಯಲಿದೆ.


ಈ ನಡುವೆ ರಾಜಮನೆತನದಿಂದ ಅಕ್ಟೋಬರ್‌ 10ರಂದು ಆಯುಧ ಪೂಜೆ ಹಾಗೂ ಖಾಸಗಿ ದರ್ಬಾರ್‌ ನಡೆಯಲಿದೆ. ರಾಜಮನೆತನದ ಯದುವೀರ್‌ ಶ್ರೀಕಂಠದತ್ತ ಚಾಮರಾಜ ಒಡೆಯರ್‌ ಖಾಸಗಿ ದರ್ಬಾರ್‌ ನಡೆಸಲಿದ್ದಾರೆ. ಯದುವೀರ್‌ಗೆ ಇದು ಎರಡನೇ ಖಾಸಗಿ ದರ್ಬಾರ್‌ ಆಗಿದೆ.
keyword: mysuru-dasara-palace-decoration

ಜಯಲಲಿತಾ ಆರೋಗ್ಯ ತಪಾಸಣೆಗೆ ಇಂಗ್ಲೆಂಡ್ ವೈದ್ಯ

ಚೆನ್ನೈ:(kannadaevision.in) ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಆರೋಗ್ಯ ತಪಾಸಣೆಗೆ ಇಂಗ್ಲೆಂಡ್ ನಿಂದ ವಿಶೇಷ ವೈದ್ಯರನ್ನು ಕರೆಸಲಾಗಿದೆ ಎಂಬ ಸುದ್ದಿಗಳು ಕೇಳಿಬಂದಿವೆ. ಆದರೆ ಜಯಲಲಿತಾ ಅವರ ಆರೋಗ್ಯ ಸ್ಥಿತಿಯ ಬಗ್ಗೆ ರಾಜ್ಯ ಸರ್ಕಾರವಾಗಲಿ, ಅಪೋಲೋ ಆಸ್ಪತ್ರೆಯಾಗಲಿ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. 
ವರದಿಗಳ ಪ್ರಕಾರ ಬ್ರಿಟಿಷ್ ವೈದ್ಯ ರಿಚರ್ಡ್ ಜಾನ್ ಬೇಲೆ ಶುಕ್ರವಾರ ಅಪೋಲೋ ಆಸ್ಪತ್ರೆಯಲ್ಲಿ ಜಯಲಲಿತಾ ಆರೋಗ್ಯವನ್ನು ತಪಾಸಣೆ ಮಾಡಿದ್ದಾರೆ. 
ಜಯಲಲಿತಾ ಅವರ ಆರೋಗ್ಯದ ಬಗ್ಗೆ ಹಲವಾರು ವದಂತಿಗಳು ಹರಿದಾಡುತ್ತಿದ್ದು, ಅಧಿಕೃತ ಹೇಳಿಕೆಗಾಗಿ ಎಲ್ಲರು ಕಾಯುತ್ತಿದ್ದಾರೆ. ಶುಕ್ರವಾರ ಯಾವುದೇ ಹೇಳಿಕೆ ನೀಡದ ಅಪೋಲೋ ಆಸ್ಪತ್ರೆ ಇಂದು ಅವರ ಆರೋಗ್ಯ ಸ್ಥಿತಿಯ ಬಗ್ಗೆ ಹೇಳಿಕೆ ನೀಡುವ ಸಾಧ್ಯತೆಯಿದೆ. 
ಸೆಪ್ಟೆಂಬರ್ 22 ರಂದು ಜ್ವರ ಮತ್ತು ದೇಹದಲ್ಲಿ ನೀರಿನ ಅಂಶದ ಕೊರೆತೆಗಾಗಿ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೆಲವು ದಿನಗಳ ನಂತರ ಜ್ವರದಿಂದ ಮುಖ್ಯಮಂತ್ರಿಗಳು ಗುಣಮುಖರಾಗಿದ್ದು, ವೀಕ್ಷಣೆಯಲ್ಲಿ ಇಡಲಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ಹೇಳಿದ್ದರು. 
ಈಮಧ್ಯೆ ಇದಕ್ಕೆ ಪ್ರತಿಕ್ರಿಯಿಸಿರುವ ಡಿಎಂಕೆ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ, ಜಯಲಲಿತಾ ಅವರು ಶೀಘ್ರ ಗುಣಮುಖರಾಗಲೆಂದು ಹಾರೈಸಿದ್ದು, ಅವರ ಆರೋಗ್ಯ ಸ್ಥಿತಿಯ ಬಗ್ಗೆ ಸರ್ಕಾರ ಹೇಳಿಕೆ ನೀಡಿ ವದಂತಿಗಳಿಗೆ ತಡೆ ಹಾಕಬೇಕೆಂದು ತಿಳಿಸಿದ್ದಾರೆ. 
"ಜಯಲಲಿತಾ ಅವರ ಆರೋಗ್ಯ ಸ್ಥಿತಿಯನ್ನು ಬಹಳ ಗುಟ್ಟಾಗಿ ಇಟ್ಟಿರುವುದರಿಂದ ಅದರ ಬಗ್ಗೆ ಕೆಲವರು ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ" ಎಂದು ಕರುಣಾನಿಧಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕನಿಷ್ಠ ಪಕ್ಷ ಕಾವೇರಿ ನದಿ ವಿವಾದದ ಬಗ್ಗೆ ರಾಜ್ಯ ಅಧಿಕಾರಿಗಳ ಜೊತೆಗೆ ಜಯಲಲಿತಾ ಆಸ್ಪತ್ರೆಯಲ್ಲೇ ಸಭೆ ನಡೆಸಿದ್ದಾರೆ ಎನ್ನಲಾದ ಫೋಟೋಗಳನ್ನಾದರೂ ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕಿತ್ತು ಎಂದು ಕರುಣಾನಿಧಿ ಹೇಳಿದ್ದಾರೆ. 
ಈಮಧ್ಯೆ ಸುಳ್ಳುವದಂತಿಗಳನ್ನು ಹರಡುತ್ತಿರುವವರ ವಿರುದ್ಧ ತಮಿಳುನಾಡು ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. 
keyword: jayalalitha-treatment-england-doctor